ಕುರುಡು ಮಲೆ

	ಮೈಸೂರು ರಾಜ್ಯದ ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನಲ್ಲಿ ಮುಳಬಾಗಲು ಪಟ್ಟಣದ ವಾಯವ್ಯಕ್ಕೆ 6 ಮೈ. ದೂರದಲ್ಲಿರುವ ಇತಿಹಾಸಪ್ರಸಿದ್ಧ ಗ್ರಾಮ. ಇಲ್ಲಿ ಅನೇಕ ಪ್ರಾಚೀನ ಅವಶೇಶಗಳು ದೊರಕಿವೆ. ಈ ಪ್ರದೇಶ ಚೋಳರ ಆಳ್ವಿಕೆಗೆ ಬಳಪಟ್ಟಿದ್ದಾಗ ಇದೊಂದು ಪ್ರಮುಖಸ್ಥಳವಾಗಿದ್ದುದರಿಂದ ಇಲ್ಲಿ ಕೆಲವು ಉತ್ತಮ ದೇವಾಲಯಗಳನ್ನು ನಿರ್ಮಿಸಲಾಗಿತ್ತು. ಸ್ಥಳ ಪುರಾಣದ ರೀತ್ಯಾ ಇದು ಕೌಂಡಿನ್ಯಕ್ಷೇತ್ರ. ಕೃತ, ತ್ರೇತಾ ಮತ್ತು ದ್ವಾಪರಯುಗಗಳಲ್ಲಿ ಇದಕ್ಕೆ ಗಣೇಶಗಿರಿ, ಕೂಟಾಚಲ ಮತ್ತು ಯಾದವಾಚಲಗಳೆಂಬ ಹೆಸರುಗಳಿದ್ದುವೆಂದೂ ಕಲಿಯುಗದಲ್ಲಿ ಕೌಂಡಿನ್ಯಕ್ಷೇತ್ರವಾಗಿದೆಯೆಂದೂ ಪ್ರತೀತಿಯಿದೆ. ಮತ್ತೊಂದು ಐತಿಹ್ಯದ ರೀತ್ಯಾ ಕುರುಡುಮಲೆ ಎಂಬುದು ಕೂಡುಮಲೆಯ ರೂಪಾಂತರ. ಸಕಲದೇವತೆಗಳೂ ಮಹಾಗಣಪತಿಯ ಅರ್ಚನೆಗಾಗಿ ಇಲ್ಲಿ ಸೇರುತ್ತಿದ್ದುದರಿಂದ ಇವಕ್ಕೆ ಕೂಡುಮಲೆಯೆಂದು ಹೆಸರಾಯಿತಂತೆ.

	ಮಹಾಗಣಪತಿ ಮಂದಿರ ಇಲ್ಲಿಯ ಪ್ರಾಚೀನತಮ ದೇವಾಲಯ. ಬಹುಶಃ ಚೋಳರ ಕಾಲದಲ್ಲಿ ನಿರ್ಮಿತವಾದ ಈ ಮಂದಿರ ಬಹಳ ಸುಂದರಕಲಾಕೃತಿ. ಹೊಯ್ಸಳ ಮತ್ತು ವಿಜಯನಗರ ಅರಸರ ಕಾಲದಲ್ಲಿ ಇದರ ಜೀರ್ಣೋದ್ಧಾರವಾಯಿತು. ಈ ದೇವಾಲಯದ ಮುಂದಿರುವ, ಗಣಪತಿಯ ವಾಹನವಾದ ಮೂಷಿಕದ ಶಿಲ್ಪ ಹಸಿರುಕಲ್ಲಿನಲ್ಲಿ ಮಾಡಲಾದ ಬೃಹದ್ಗಾತ್ರದ ಉತ್ತಮ ಕಲಾಕೃತಿ. ದೇವಾಲಯದ ಗರ್ಭಗೃಹದ (20' ಉದ್ದ, 1 1/2  ಅಗಲ ಮತ್ತು  16'  ಎತ್ತರ) ಮುಂದಿನ ಹದಿನಾರು ಮೂಲೆಗಳ ಕಂಬಗಳ ಮೇಲಿನ ಶಿಲ್ಪಗಳು ಸಾಧಾರಣವಾಗಿವೆ. ಮಹಾಗಣಪತಿಯ ವಿಗ್ರಹ 2' ಎತ್ತರದ ಪೀಠದಮೇಲೆ 1 1/2  ಎತ್ತರದ ಆಸನದಲ್ಲಿ ಕುಳಿತಿದ್ದು 8 1/2' ಎತ್ತರವಿದೆ. ಪಾಶಾಂಕುಶ  ಹಸ್ತನಾದ ಗಣಪತಿ ತನ್ನ ಕೈಯಲ್ಲಿಯ ಮೋದಕವನ್ನು ಸವಿಯುತ್ತಿರುವಂತೆ ರೂಪಿಸಲಾಗಿದೆ. ವಿಗ್ರಹ ಹಾವಿನ ಉದರ ಬಂಧ ಮತ್ತು ಯಜ್ಞೋಪವೀತಗಳನ್ನು ಧರಿಸಿದೆ. ಅದರ ಹೊಟ್ಟೆಯ ಸುತ್ತಳತೆ 13'. ಸುಕನಾಸಿ (10'X8') ಮತ್ತು  ನವರಂಗ (25'X 25') ಇವು ಈ ಮಂದಿರದ ಇತರ ಭಾಗಗಳು. ನವರಂಗದ ದಕ್ಷಿಣಭಾಗದಲ್ಲಿ 5' ಎತ್ತರದ, ಹನ್ನೆರಡು ಕೈಗಳುಳ್ಳ, ಮಯೂರವಾಹನನಾದ ಕುಮಾರನ ಪ್ರತಿಮೆಯಿದೆ. ಇದೊಂದು ಸುಂದರಶಿಲ್ಪ. 

	ಇಲ್ಲಿಯ ಅತ್ಯಂತ ಸುಂದರ ಕಟ್ಟಡ ಸೋಮೇಶ್ವರ ದೇವಾಲಯ. ಇದರಲ್ಲಿ ಗರ್ಭಗುಡಿ (20'x10'), ಸುಕನಾಸಿ  (10'X8') ಮತ್ತು ನವರಂಗ (25'x25') ಇವೆ. ನವರಂಗದ ಅಷ್ಟಮುಖದ ನಾಲ್ಕು ಕಂಬಗಳ ಮೇಲೂ ಸುಂದರವಾದ ಶೈವ - ವೈಷ್ಣವ ವಿಗ್ರಹಗಳನ್ನು ಕೆತ್ತಲಾಗಿದೆ. ಒಂದು ಕಂಬದ ಮೇಲಿರುವ ಆನೆಯನ್ನು ಕೊಲ್ಲುತ್ತಿರುವ ಸಿಂಹದ ಶಿಲ್ಪ ಗಂಗರನ್ನು ಹೊಯ್ಸಳರು ಸೋಲಿಸಿದ ಸಂಕೇತವಿರಬಹುದೆಂದು ಊಹಿಸಲಾಗಿದೆ. ಹೊರಗೋಡೆಗಳ ಮೇಲೆ ಸ್ತಂಭಿಕ ಮತ್ತು ಗೂಡುಗಳ ಸುಂದರ ಅಲಂಕರಣವಿದೆ. ಗರ್ಭಗುಡಿಯಲ್ಲಿರುವ ಲಿಂಗದ ಮುಂಭಾಗದ ಕಿಟಕಿಯ ಬಳಿ ಮೂರು ವ್ಯಕ್ತಿಗಳ ಶಿಲ್ಪಗಳಿವೆ. ಇವು 13 ನೆಯ ಶತಮಾನದಲ್ಲಿ ಚೋಳರ ಸಾಮಂತನಾಗಿದ್ದ ಇಳವಂಜಿ ವಾಸುದೇವರಾಯ ಮತ್ತು ಆತನ ರಾಣಿಯರ ಮೂರ್ತಿಗಳೆಂದು ಗುರುತಿಸಲಾಗಿದೆ. ಈ ದೇವಾಲಯದ ಪ್ರಾಕಾರದಲ್ಲಿ ಪಾರ್ವತಿ ಮತ್ತು ಕಾಮಾಕ್ಷಿ ಅಮ್ಮನವರ ಮಂದಿರಗಳೂ ಇವೆ.

ಪಾಳುಬಿದ್ದಿರುವ ಚೆನ್ನರಾಯಸ್ವಾಮಿ ದೇವಾಲಯ ಸಹ ಆ ಸುಮಾರಿಗೆ ಸೇರಿದ್ದಿರಬಹುದು. ಗ್ರಾಮದ ಉತ್ತರಕ್ಕೆ ಮುರಿದ ತೋರಣದ ಕಂಬಗಳೂ ಮಾಸ್ತಿಕಲ್ಲೊಂದೂ ಇವೆ. ಹೊಯ್ಸಳ ಮುಮ್ಮಡಿ ಬಲ್ಲಾಳ ಆ ಪ್ರದೇಶವನ್ನು  ಆಳುತ್ತಿದ್ದನೆಂದೂ ಆಗ ಹೊರಡಿಸಿದ ವೀರರಾಯಿ ಹಣ ದೊರಕಿವೆಯೆಂದೂ ಹೇಳಲಾಗಿದೆ. ಈ ಪ್ರದೇಶದಲ್ಲಿ ಹಳೆಯ ಊರಿನ ಅವಶೇಷಗಳು ಕಾಣಬರುತ್ತವೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ